ಯುದ್ಧರಂಗದಲ್ಲಿಯೂ ಇಂಗಾಲ ಸಂಯುಕ್ತಗಳ ಉಪಯೋಗ ಬೇಕಾದಷ್ಟಿದೆ. ಪ್ರಸಿದ್ಧ ಸ್ಪೋಟಕಗಳಾದ ಟಿ.ಎನ್.ಟಿ., ನೈಟ್ರೊಗ್ಲಿಸರಿನ್ ಮೊದಲಾದವುಗಳು ಇಂಗಾಲಸಂಯುಕ್ತಗಳು. ನೈಟ್ರೋಸಂಯುಕ್ತಗಳಿಂದ ಕೂಡಿದ ರಾಕೆಟ್ ಇಂಧನಗಳು, ರಾಕೆಟ್ ಇಂಧನದ ಆವರಣಗಳಿಗಾಗಿ ಉಪಯೋಗಿಸುವ ವಿಶಿಷ್ಟ ದರ್ಜೆಯ ಪ್ಲಾಸ್ಟಿಕ್ಕುಗಳೇ ಮೊದಲಾದುವು ಈ ರಂಗದಲ್ಲಿ ಇಂಗಾಲ ಸಂಯುಕ್ತಗಳ ಮುಖ್ಯ ಉಪಯೋಗಗಳನ್ನು ಪ್ರತಿನಿಧಿಸುತ್ತವೆ. ವಿಪರೀತ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನುಂಟುಮಾಡುವ ಅಶ್ರುವಾಯುವಿನಂಥ (ಟಿಯರ್ ಗ್ಯಾಸ್) ಮತ್ತು ಅದಕ್ಕೂ ಹೆಚ್ಚು ಹಾನಿಕರವಾದ ಅನೇಕ ಇಂಗಾಲಸಂಯುಕ್ತಗಳನ್ನು ಯುದ್ದಗಳಲ್ಲಿ ಉಪಯೋಗಿಸಲಾಗುತ್ತದೆ. ಪ್ರತಿ ರಂಗದಲ್ಲಿಯೂ ಎಲ್ಲೆಲ್ಲೂ ಉಪಯೋಗಿಸಲಾಗುತ್ತ್ತಿರುವ ಸರ್ವವ್ಯಾಪಿ ಇಂಗಾಲಸಂಯುಕ್ತಗಳ ಉಪಯೋಗಗಳೆಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಿಲ್ಲ. ಜೀವನದ ಪ್ರತಿ ರಂಗ, ಪ್ರತಿ ಹಜ್ಜೆಗಳಲ್ಲೂ ಹಾಸುಹೊಕ್ಕಾಗಿ ಇಂಗಾಲಸಂಯುಕ್ತಗಳು ಇವೆ. ಆದ್ದರಿಂದ ಇಂಗಾಲಸಂಯುಕ್ತರಸಾಯನಶಾಸ್ತ್ರದಲ್ಲಿನ ಹಲವು ಇತ್ತೀಚಿನ ಮುನ್ನಡೆಗಳು ಜನಜೀವನದ ಮೇಲೆ ಬೀರುವ ಅಪಾರ ಪರಿಣಾಮಗಳನ್ನು ಇಲ್ಲಿ ವಿವರಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ